ನಾವು ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳು, ಮಹಿಳೆಯರು, ಮತ್ತು ಲಿಂಗ ಹಾಗೂ ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಕೆಲಸ ಮಾಡುವ 160ಕ್ಕೂ ಹೆಚ್ಚು ಸಂಸ್ಥೆಗಳಿಗೆ ನೆರವು ನೀಡುತ್ತೇವೆ
ನಮ್ಮ ಸಹವರ್ತಿಗಳು ಲಿಂಗ ಆಧಾರಿತ ಹಿಂಸೆ ಮತ್ತು ತಾರತಮ್ಯವನ್ನು ತಡೆಗಟ್ಟಲು ಶ್ರಮಿಸುತ್ತಾರೆ. ಅಲ್ಲದೇ, ಮಹಿಳೆಯರು, ಹೆಣ್ಣುಮಕ್ಕಳು, ಹಾಗೂ ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಅಗತ್ಯ ಬೆಂಬಲ, ನ್ಯಾಯ, ಅವಶ್ಯ ಸೇವೆಗಳು ಮತ್ತು ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ನೆರವಾಗುತ್ತಾರೆ.
ಈ ಕೆಲಸಗಳಲ್ಲಿ ಬಹುಪಾಲು ಸಮುದಾಯ-ಆಧಾರಿತ ಬೆಂಬಲ ವ್ಯವಸ್ಥೆಗಳಿಂದ ನಡೆಯುತ್ತವೆ. ಸಮುದಾಯ ಸಂಪನ್ಮೂಲ ಕೇಂದ್ರಗಳು ಮತ್ತು ಡ್ರಾಪ್-ಇನ್ ಕೇಂದ್ರಗಳು ಆಪ್ತಸಮಾಲೋಚನೆ, ಕಾನೂನು ನೆರವು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತವೆ. ಮಹಿಳಾ ಮತ್ತು ಹದಿಹರೆಯದ ಹೆಣ್ಣುಮಕ್ಕಳ ಒಕ್ಕೂಟಗಳು ಒಗ್ಗಟ್ಟನ್ನು ಮೂಡಿಸಲು, ಸಮುದಾಯದ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಬದಲಾವಣೆಗೆ ಧ್ವನಿಯೆತ್ತಲು ಸೂಕ್ತ ವೇದಿಕೆಗಳನ್ನು ನಿರ್ಮಿಸುತ್ತವೆ. ತರಬೇತಿ ಪಡೆದ ಸಮುದಾಯದ ನಾಯಕರು ತುರ್ತು ಸಂದರ್ಭಗಳಲ್ಲಿ ಬೇಗ ನೆರವಿಗೆ ಬರುತ್ತಾರೆ, ಅವಶ್ಯವಿರುವವರಿಗೆ ಅಗತ್ಯ ಸಹಾಯ ಮಾಡುತ್ತಾರೆ ಮತ್ತು ಸಾಮಾಜಿಕ ಬದಲಾವಣೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.
ಲಿಂಗ ಆಧಾರಿತ ಹಿಂಸೆಯನ್ನು ಅನುಭವಿಸಿ ಬದುಕುಳಿದವರಿಗೆ, ನ್ಯಾಯ, ವಿವಿಧ ಅಗತ್ಯ ಸೇವೆಗಳು ಹಾಗೂ ಪರಿಹಾರ ಧನವನ್ನು ಪಡೆಯಲು ನಮ್ಮ ಸಹವರ್ತಿಗಳು ಸಂಪೂರ್ಣವಾಗಿ ನೆರವಾಗುತ್ತಾರೆ. ಈ ನೆರವು ಆಪ್ತಸಮಾಲೋಚನೆ, ಸುರಕ್ಷಿತ ಆಶ್ರಯ, ಆರೋಗ್ಯ ಸೇವೆಗಳು ಮತ್ತು ಅವರ ಜೀವನವನ್ನು ಮತ್ತೆ ಕಟ್ಟುಕೊಳ್ಳುವುದಕ್ಕೆ ಸಹಾಯ – ಇವುಗಳ ರೂಪದಲ್ಲಿರುತ್ತದೆ. ವ್ಯಕ್ತಿಗತ ಬೆಂಬಲದ ಜೊತೆಗೆ, ಸಮಾಜದಲ್ಲಿ ಹಿಂಸೆ ಮತ್ತು ತಾರತಮ್ಯವನ್ನು ಸಾಮಾನ್ಯೀಕರಿಸುವ ಮನಸ್ಥಿತಿಗಳನ್ನು ಬದಲಾಯಿಸಲು ಸಹವರ್ತಿಗಳು ಸಮುದಾಯಗಳೊಂದಿಗೆ ಸಕ್ರಿಯವಾಗಿ ಶ್ರಮಿಸುತ್ತಾರೆ.

ಲಿಂಗ ಮತ್ತು ಲಿಂಗಾಯಿತ ಅಲ್ಪಸಂಖ್ಯಾತ ಸಮುದಾಯಗಳಿಗೆ, ಸುರಕ್ಷಿತ ಆಶ್ರಯ, ಆರೋಗ್ಯ ಸೇವೆಗಳು, ಉಚಿತ ಕಾನೂನು ನೆರವು, ಲಿಂಗ-ದೃಢೀಕರಣ ಸೇವೆಗಳು ಹಾಗೂ ಸುಸ್ಥಿರ ಜೀವನೋಪಾಯದ ಅವಕಾಶಗಳು ಸೇರಿದಂತೆ ಮೂಲಭೂತ ಹಕ್ಕುಗಳು ಮತ್ತು ಸೇವೆಗಳನ್ನು ಸುಲಭವಾಗಿ ಪಡೆಯಲು ನಮ್ಮ ಸಹವರ್ತಿಗಳು ನೆರವಾಗುತ್ತಾರೆ. ಅಲ್ಲದೆ, ಜನರು ಈ ಸೇವೆಗಳನ್ನು ಪಡೆಯಲು ಮತ್ತು ತಮ್ಮ ಹಕ್ಕುಗಳನ್ನು ಚಲಾಯಿಸಲು ಅಡ್ಡಿಯಾಗಿರುವ ಸಾಮಾಜಿಕ ಕಳಂಕ ಹಾಗೂ ತಾರತಮ್ಯಗಳನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಾರೆ.
ನಮ್ಮ ಸಹವರ್ತಿಗಳು ಪೊಲೀಸ್ ಇಲಾಖೆ, ಒನ್ ಸ್ಟಾಪ್ ಸೆಂಟರ್ಗಳು, ರಕ್ಷಣಾಧಿಕಾರಿಗಳು, ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ಕಲ್ಯಾಣ ಅಧಿಕಾರಿಗಳು, ಸ್ಥಳೀಯ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಈ ಸಂಬಂಧಗಳು ರೆಫೆರಲ್ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಸರ್ಕಾರಿ ಯೋಜನೆಗಳು, ಸೇವೆಗಳು ಹಾಗೂ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಮಾಡಲು ಸಹಾಯ ಮಾಡುತ್ತವೆ.
ಈ ಕೆಲಸವು ಹದಿಹರೆಯದ ಹೆಣ್ಣುಮಕ್ಕಳು ಹಾಗೂ ಸಮುದಾಯದ ಸದಸ್ಯರಲ್ಲಿ ಲಿಂಗ ಸಮಾನತೆ, ಹಕ್ಕುಗಳು ಮತ್ತು ಹಿಂಸೆಯ ತಡೆಗಟ್ಟುವಿಕೆಯ ಕುರಿತು ಜಾಗೃತಿ ಹಾಗೂ ತಿಳಿವಳಿಕೆಯನ್ನು ಮೂಡಿಸುವುದನ್ನೂ ಒಳಗೊಂಡಿದೆ. ಶಿಕ್ಷಣ, ಸಹಪಾಠಿಗಳೊಡನೆ ಸಂವಹನ ಮತ್ತು ಸಾಮೂಹಿಕ ಪ್ರಯತ್ನದ ಮೂಲಕ, ತಾರತಮ್ಯವನ್ನು ಗುರುತಿಸಲು, ಅಗತ್ಯ ನೆರವನ್ನು ಪಡೆಯಲು ಮತ್ತು ತಮ್ಮ ಜೀವನದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳಿಗೆ ಧೈರ್ಯವಾಗಿ ಸ್ಪಂದಿಸಲು ಸಹವರ್ತಿಗಳು ಜನರಿಗೆ ಬೆಂಬಲ ನೀಡುತ್ತಾರೆ.
ಲಿಂಗ ನ್ಯಾಯಕ್ಕೆ ಸಂಬಂಧಿಸಿದ ನಮ್ಮ ಎಲ್ಲಾ ಕೆಲಸಗಳನ್ನು ನಮ್ಮ ಸಹವರ್ತಿ ಸಂಸ್ಥೆಗಳ ಮೂಲಕವೇ ಮಾಡಲಾಗುತ್ತದೆ.

