ಬಡವರು, ದುರ್ಬಲರು ಮತ್ತು ಅಂಚಿಗೆ ತಳ್ಳಲ್ಪಟ್ಟ ಜನರು ತಮ್ಮ ಹಕ್ಕುಗಳನ್ನು ಅರಿಯಲು, ಕಾನೂನು ನೆರವು ಪಡೆಯಲು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುವ ಸಂಸ್ಥೆಗಳನ್ನು ನಾವು ಬೆಂಬಲಿಸುತ್ತೇವೆ.
ನಮ್ಮ ಸಹವರ್ತಿ ಸಂಸ್ಥೆಗಳು ಈ ಕೆಲಸದ ಮೂಲಕ ತಲುಪುವ ಸಮುದಾಯಗಳಲ್ಲಿ ವಿಚಾರಣಾಧೀನ ಮತ್ತು ಬಿಡುಗಡೆಯಾದ ಕೈದಿಗಳು, ಕಾನೂನಿನ ಜೊತೆ ಸಂಘರ್ಷಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳು, ದಲಿತರು ಮತ್ತು ಆದಿವಾಸಿಗಳು, ವಲಸೆ ಕಾರ್ಮಿಕರು ಹಾಗೂ ನ್ಯಾಯ ಪಡೆಯುವಲ್ಲಿ ಸಾಮಾಜಿಕ, ಆರ್ಥಿಕ ಅಥವಾ ಭೌಗೋಳಿಕ ಅಡೆತಡೆಗಳನ್ನು ಎದುರಿಸುತ್ತಿರುವ ಜನರು ಸೇರಿದ್ದಾರೆ. ಈ ಜನರು ತಮ್ಮ ಹಕ್ಕುಗಳನ್ನು ಚಲಾಯಿಸಲು ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಲು ನೆರವಾಗುವಂತೆ ನಮ್ಮ ಸಹವರ್ತಿಗಳು ಕಾನೂನು ಪ್ರಾತಿನಿಧ್ಯ, ಸಲಹೆ ಮತ್ತು ಸಮುದಾಯ ಆಧಾರಿತ ನೆರವನ್ನು ಒದಗಿಸುತ್ತಾರೆ.

ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ನೀಡುವುದು ನಮ್ಮ ಈ ಕೆಲಸದ ಒಂದು ಮುಖ್ಯ ಭಾಗ. ನಮ್ಮ ಸಹವರ್ತಿ ಸಂಸ್ಥೆಗಳು ಕಾರಾಗೃಹಗಳಿಗೆ ಭೇಟಿ ನೀಡಿ, ಪ್ರಕರಣಗಳನ್ನು ಗುರುತಿಸಿ, ವಿಚಾರಣೆ ಮತ್ತು ಮೇಲ್ಮನವಿಗಳ ಸಮಯದಲ್ಲಿ ಕಾನೂನು ಸಲಹೆ ಹಾಗೂ ಪ್ರಾತಿನಿಧ್ಯವನ್ನು ಒದಗಿಸುತ್ತವೆ, ಮತ್ತು ಕಾನೂನು ಸೇವೆಗಳು ಹಾಗೂ ಕಾರಾಗೃಹ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸುತ್ತವೆ. ಅವರು ಕುಟುಂಬಗಳೊಂದಿಗೂ ನಿಕಟವಾಗಿ ಕೆಲಸ ಮಾಡುತ್ತಾರೆ ಹಾಗೂ ಜೈಲುವಾಸದ ಸಮಯದಲ್ಲಿ ಮತ್ತು ಬಿಡುಗಡೆಯ ನಂತರ ಪುನರ್ವಸತಿಗೆ ಬೆಂಬಲ ನೀಡುತ್ತಾರೆ.
ನಾವು ಕಾನೂನು ಸೇವೆಗಳ ಗುಣಮಟ್ಟ ಮತ್ತು ಹರಹನ್ನು ಉತ್ತಮಪಡಿಸುವ ಪ್ರಯತ್ನಗಳಿಗೂ ಬೆಂಬಲ ನೀಡುತ್ತೇವೆ. ಕಾನೂನು ಮತ್ತು ಸಾಮಾಜಿಕ ಕಾರ್ಯದ ಫೆಲೋಷಿಪ್ಗಳು, ಮಾರ್ಗದರ್ಶನ ಹಾಗೂ ನಿರಂತರ ಕಾನೂನು ಶಿಕ್ಷಣ ಕಾರ್ಯಕ್ರಮಗಳಿಂದ ಯುವ ವಕೀಲರು ಕೌಶಲ್ಯಪೂರ್ಣ ಮತ್ತು ಸಾರ್ವಜನಿಕ ಹಿತಾಸಕ್ತಿ ಹೊಂದಿದ ವಕೀಲರಾಗಿ ಬೆಳೆಯಲು ಸಹಾಯ ಮಾಡುವುದರ ಜೊತೆಗೆ, ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವಕೀಲರ ಸಾಮರ್ಥ್ಯವನ್ನೂ ಬಲಪಡಿಸುತ್ತೇವೆ.
ನಮ್ಮ ಸಹವರ್ತಿ ಸಂಸ್ಥೆಗಳು ಸಮುದಾಯದ ನಾಯಕರು, ಕಾನೂನು ಸ್ವಯಂಸೇವಕರು ಮತ್ತು ಮಾನವ ಹಕ್ಕುಗಳ ರಕ್ಷಕರಿಗೆ ಕಾನೂನು ಅರಿವನ್ನು ಹೆಚ್ಚಿಸಲು, ಹಕ್ಕುಗಳ ಉಲ್ಲಂಘನೆಗಳನ್ನು ಗುರುತಿಸಲು ಹಾಗೂ ಜನರನ್ನು ಕಾನೂನು ಸಂಸ್ಥೆಗಳು ಮತ್ತು ಇತರ ಬೆಂಬಲ ವ್ಯವಸ್ಥೆಗಳೊಂದಿಗೆ ಜೋಡಿಸಲು ತರಬೇತಿ ನೀಡುತ್ತವೆ. ಹಲವು ಪ್ರದೇಶಗಳಲ್ಲಿ, ಇದು ಅತ್ಯಂತ ದೂರದ ಪ್ರದೇಶಗಳಲ್ಲಿರುವ ಅಥವಾ ಐತಿಹಾಸಿಕವಾಗಿ ಸಾಂಸ್ಥಿಕ ವ್ಯವಸ್ಥೆಗಳಿಂದ ವಂಚಿತರಾದ ಸಮುದಾಯಗಳಿಗೆ ಕಾನೂನು ನೆರವನ್ನು ತಲುಪಿಸಲು ಸಹಾಯ ಮಾಡಿದೆ.
ಈ ಕಾರ್ಯವು ದೀರ್ಘಾವಧಿಯ ಹಾಗೂ ಅನಗತ್ಯ ಬಂಧನ, ಕಳಪೆ ಮಟ್ಟದ ಕಾನೂನು ನೆರವು, ಜಾತಿ ತಾರತಮ್ಯ, ಜಮೀನು ಮತ್ತು ಅರಣ್ಯ ಹಕ್ಕುಗಳಿಗೆ ಇರುವ ಅಡೆತಡೆಗಳು, ಹಾಗೂ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಕಾನೂನು ಮತ್ತು ಸಾಮಾಜಿಕ ಸವಾಲುಗಳು ಸೇರಿದಂತೆ ವಿವಿಧ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತದೆ.
ನಮ್ಮ ಸಹವರ್ತಿ ಉಪಕ್ರಮಗಳಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು (NLUs) ಮತ್ತು ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ಜಂಟಿಯಾಗಿ ನಡೆಸುವ ನ್ಯಾಯಸಮ್ಮತ ವಿಚಾರಣೆ (fair-trial) ಮತ್ತು ವಿಚಾರಣಾಧೀನ ಕೈದಿಗಳ ಬೆಂಬಲ ಕಾರ್ಯಕ್ರಮಗಳು, ಯುವ ವಕೀಲರಿಗಾಗಿ ಕಾನೂನು ಫೆಲೋಷಿಪ್ಗಳು, ಜಿಲ್ಲಾ ನ್ಯಾಯಾಲಯದ ಅಭ್ಯಾಸಿಗಳಿಗಾಗಿ ಕಾನೂನು ಶಿಕ್ಷಣದ ಮುಂದುವರಿಕೆ, ಸಮುದಾಯ ಕಾನೂನು ಸೇವಾ ಕ್ಲಿನಿಕ್ಗಳು, ಹಾಗೂ ಪ್ಯಾರಾಲೀಗಲ್ ಸ್ವಯಂಸೇವಕರು ಮತ್ತು ಮಾನವ ಹಕ್ಕುಗಳ ರಕ್ಷಕರ ಜಾಲಗಳು ಸೇರಿವೆ.

